ಕದನ ವಿರಾಮಕ್ಕೆ ಒಪ್ಪದ ಇರಾನ್...! ಶಾಶ್ವತವಾಗಿ ಕೊನೆಗೊಳಿಸಲು ಡಿಮ್ಯಾಂಡ್
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇರಾನ್-ಅಮೆರಿಕ ಸಂಘರ್ಷದ ಮಧ್ಯೆ ಕದನ ವಿರಾಮಕ್ಕೆ ಬಹಳ ಸರ್ಕಸ್ ಮಾಡಲಾಗುತ್ತಿದೆ. ಇದೀಗ ಇರಾನ್ ಸೋಮವಾರ ಅಮೆರಿಕ ಬೆಂಬಲಿತ ಕದನ ವಿರಾಮ ಪ್ರಸ್ತಾವನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ಬದಲಿಗೆ ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸುವ ತನ್ನದೇ ಆದ 10 ಅಂಶಗಳ ಯೋಜನೆಯನ್ನು ಮಂಡಿಸಿದೆ ಎಂದು ಇರಾನ್ ರಾಜ್ಯ ಸುದ್ದಿ ಸಂಸ್ಥೆ ಐಆರ್ಎನ್ಎ ವರದಿ ಮಾಡಿದೆ. ಇರಾನ್ ವಿದೇಶಾಂಗ ಸಚಿವಾಲಯ ಅಮೆರಿಕದ ಕದನ ವಿರಾಮ ಯೋಜನೆಯನ್ನು ಔಪಚಾರಿಕವಾಗಿ ತಿರಸ್ಕರಿಸಿದ್ದು, ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು 10 ಅಂಶಗಳ ಪ್ರಸ್ತಾಪವನ್ನು ಮಂಡಿಸಿದೆ ಎಂದು ಹೇಳಿದೆ. ಇರಾನ್ ಇದೀಗ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು 10 ಅಂಶಗಳ ಪ್ರಸ್ತಾಪವನ್ನು ಮಂಡಿಸಿದ್ದು, ಈ ಯೋಜನೆಯಲ್ಲಿ ದೀರ್ಘಕಾಲೀನ ಶಾಂತಿ ಮತ್ತು ಪರಿಹಾರಕ್ಕೆ ತನ್ನ ಷರತ್ತುಗಳನ್ನು ವಿವರಿಸಿದೆ. ಇದು ಕೇವಲ ತಾತ್ಕಾಲಿಕ ಕದನ ವಿರಾಮಕ್ಕಿಂತ ಹೆಚ್ಚಾಗಿ ಯುದ್ಧಕ್ಕೆ ಶಾಶ್ವತ ಅಂತ್ಯವನ್ನು ಬಯಸುತ್ತದೆ. ಹಾರ್ಮುಜ್ ಜಲಸಂಧಿಯ ಬಗ್ಗೆ ಇರಾನ್ ವಿಶೇಷವಾಗಿ ಉಲ್ಲೇಖಿಸಿದೆ. ಉದ್ವಿಗ್ನತೆ ಕಡಿಮೆಯಾದರೆ ಮಾತ್ರ ಜಲಸಂಧಿಯನ್ನು ಪುನಃ ತೆರೆಯಲು ಸಾಧ್ಯ ಎಂದು ಹೇಳಿದೆ. ಪ್ರತಿ ಹಡಗಿಗೆ 2 ಮಿಲಿಯನ್ ಡಾಲರ್ ಶುಲ್ಕ ವಿಧಿಸುವುದು, ಒಮಾನ್‌ನೊಂದಿಗೆ ಆದಾಯ ಹಂಚಿಕೊಳ್ಳುವುದು ಮತ್ತು ಸುರಕ್ಷಿತ ಮಾರ್ಗ ಖಚಿತಪಡಿಸುವುದು ಈ ಯೋಜನೆಯ ಭಾಗವಾಗಿದೆ. ಈ ಶುಲ್ಕದಿಂದ ಬರುವ ಹಣವನ್ನು ಯುದ್ಧದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್ನಿರ್ಮಾಣಕ್ಕೆ ಬಳಸುವುದಾಗಿ ಇರಾನ್ ಪ್ರಸ್ತಾಪಿಸಿದೆ. ಇರಾನ್ ವಿದೇಶಾಂಗ ಸಚಿವಾಲಯ ಅಮೆರಿಕದ ಮೂಲಕ ಬಂದ 15 ಅಂಶಗಳ ಪ್ರಸ್ತಾವನೆಯನ್ನು ‘ಅತಿಯಾದ ಬೇಡಿಕೆ’ ಮತ್ತು ಅವಾಸ್ತವಿಕ ಎಂದು ಬಣ್ಣಿಸಿದೆ. ತನ್ನ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಮಾತುಕತೆಗಳು ಮುಂದುವರಿಯುತ್ತವೆ ಎಂದು ಸ್ಪಷ್ಟಪಡಿಸಿದೆ.
ಇತರೆ ಸುದ್ದಿಗಳು