ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...
ಬೆಂಗಳೂರು : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಯುತ್ತಿದ್ದ ರಿಸಲ್ಟ್ ದಿನ ಕೊನೆಗೂ ಅನೌನ್ಸ್ ಆಗಿದ್ದು, ನಾಳೆ ಅಂದರೆ, ಏಪ್ರಿಲ್ 9 ಗುರುವಾರ ಸಂಜೆಯ ಬಳಿಕ ಘೋಷಣೆಯಾಗಲಿದೆ. ಲಕ್ಷಾಂತರ ವಿದ್ಯಾರ್ಥಿಗಳು ನಿರೀಕ್ಷೆ ಇಟ್ಟಿರುವ ದ್ವಿತೀಯ ಪಿಯುಸಿ ರಿಸಲ್ಟ್‌ಗೆ ಕಡೆಗೂ ದಿನಾಂಕ ಮರುನಿಗದಿಯಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಳ್ಳಬೇಕಿತ್ತು. ಆದರೆ ಮುಂದೂಡಿಕೆಯಾದ ಹಿನ್ನೆಲೆ, ಏಪ್ರಿಲ್ 9 ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಾಳೆ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯ ಮತದಾನ ಇರುವುದರಿಂದ ಇದು ಮುಗಿದ ಬಳಿಕ, ಸಂಜೆ ಸಚಿವರು ಸುದ್ದಿಗೋಷ್ಟಿ ನಡೆಸಿ , ಫಲಿತಾಂಶ ಘೋಷಣೆ ಮಾಡಲಿದ್ದಾರೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಪ್ರಕಟಣೆ ಮೂಲಕ ತಿಳಿಸಿದ್ದು, ಏಪ್ರಿಲ್ 7 ರಂದು ಫಲಿತಾಂಶ ಪ್ರಕಟಿಸುತ್ತಿಲ್ಲ. ಕೊನೆಯ ಹಂತದ ಮೌಲ್ಯಮಾಪನ ಕೆಲಸ ಬಾಕಿ ಇರುವುದರಿಂದ ಫಲಿತಾಂಶ ಪ್ರಕಟಿಸಲಾಗುತ್ತಿಲ್ಲ ಎಂದು ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ಮಾಹಿತಿ ಕೊಟ್ಟಿದ್ದರು. ಇದೀಗ ಗುರುವಾರ, ಏಪ್ರಿಲ್ 9 ಕ್ಕೆ ಪರೀಕ್ಷೆ ದಿನಾಂಕ ಮರುನಿಗದಿಯಾಗಿದೆ.ಇನ್ನೊಂದೆಡೆ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ ಅಂದರೆ ಏ.9 ಪ್ರಕಟಿಸುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕ ಎಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ. ಈ ಬಾರಿ ಡಿಜಿ ಲಾಕರ್ ಮೂಲಕವೂ ವಿದ್ಯಾರ್ಥಿಗಳು ಫಲಿತಾಂಶ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದ್ದು, ಸರ್ವರ್ ಸಮಸ್ಯೆಯಿಂದಾಗುತ್ತಿದ್ದ ಸಮಸ್ಯೆಗಳು ನಿವಾರಣೆಯಾಗುವ ನಿರೀಕ್ಷೆಯಿದೆ, ಎಂದು ಅವರು ತಿಳಿಸಿದ್ದಾರೆ. ಏ.9ರಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಲಿದ್ದಾರೆ. ಅಂದೇ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಮಂಡಳಿ ತನ್ನ ಅಧಿಕೃತ ವೆಬ್‌ಸೈಟ್ karresults.nic.in. ನಲ್ಲಿ ಫಲಿತಾಂಶ ಪ್ರಕಟಿಸಲಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕ ಹಾಕಿ ರಿಸಲ್ಟ್ ನೋಡಬಹುದು. ಅಂಕಪಟ್ಟಿ ಡೌನ್ಲೋಡ್ ಮಾಡಿ, ಪ್ರಿಂಟ್ ಕುಡಾ ತೆಗೆದುಕೊಳ್ಳಬಹುದು. ಈ ವರ್ಷ ಒಟ್ಟು 7,10,363 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ರಿಸಲ್ಟ್‌ಗಾಗಿ ಎದುರುನೋಡುತ್ತಿದ್ದಾರೆ.
ಇತರೆ ಸುದ್ದಿಗಳು