ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸುತ್ತಿದ್ದ ಆರೋಪಿ ಬಂಧನ...!
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ದೇಶಾದ್ಯಂತ ಸರ್ಕಾರಿ ಕಚೇರಿ ಮತ್ತು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸುತ್ತಿದ್ದ ಶ್ರೀನಿವಾಸ್ ಎಂಬಾತನ್ನನು ಬಂಧಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಇಂದು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಹುಸಿ ಬಾಂಬ್ ಸಂದೇಶಗಳನ್ನ ಕಳಿಸಿ ಸರ್ಕಾರಿ ಕಚೇರಿ, ಶಾಲೆಗಳಲ್ಲಿ ಆತಂಕ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಕೊನೆಗೂ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತದ 6ನೇ ಕ್ರಾಸ್‌ನಲ್ಲಿರುವ ಮನೆಯೊಂದರ ಮೇಲೆ ದೆಹಲಿ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿದೆ. ಶ್ರೀನಿವಾಸ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಮೈಸೂರಿನಲ್ಲೇ ಕುಳಿತು ನಿಗೂಢವಾಗಿ ಬೆದರಿಕೆ ಇಮೇಲ್‌ಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ಬಂಧಿತ ಆರೋಪಿ ಶ್ರೀನಿವಾಸ್ ಇತ್ತೀಚೆಗೆ ಸರ್ಕಾರಿ ಕಚೇರಿಗಳು, ಶಾಲಾ ಕಟ್ಟಡಗಳು ಹಾಗೂ ನ್ಯಾಯಾಲಯಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಿ ಆತಂಕ ಸೃಷ್ಟಿಸಿದ್ದ. ಹಲವಾರು ಕಚೇರಿಗಳಿಗೆ, ಶಾಲೆಗಳಿಗೆ ಭಯೋತ್ಪಾದಕ ರೀತಿ ಹುಸಿ ಬಾಂಬ್ ಕಳಿಸಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದ ಆರೋಪಿ. ಕೇವಲ ಒಂದೇ ತಿಂಗಳಿನಲ್ಲಿ ಹಲವು ಬಾರಿ ಇಂತಹ ಸಂದೇಶಗಳನ್ನ ಇಮೇಲ್ ಮೂಲಕ ಕಳಿಸಿ ಭದ್ರತಾ ಏಜೆನ್ಸಿಗಳಿಗೆ ತಲೆನೋವಾಗಿದ್ದ. ದೇಶದ ಭದ್ರತೆಗೆ ಸವಾಲಾಗಿದ್ದ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕಿಡಿಗೇಡಿಯ ಪತ್ತೆಗೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿತ್ತು. ಸದ್ಯ ಆರೋಪಿಯನ್ನ ಬಂಧಿಸಿದ್ದು, ಕಾರ್ಯಾಚರಣೆಯ ವೇಳೆ ಆರೋಪಿಯ ಮನೆಯಲ್ಲಿದ್ದ ಹಲವು ಸಿಮ್ ಕಾರ್ಡ್‌ಗಳು, ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇತರೆ ಸುದ್ದಿಗಳು