ಕುಂದಾನಗರಿ ಬೆಳಗಾವಿಯಲ್ಲಿ ಟಿಪ್ಪರ್ ಲಾರಿ ಹರಿದು ಪೌರ ಕಾರ್ಮಿಕೆ ಸಾವು ...
ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿಂದು ಬೆಳ್ಳಂಬೆಳಗ್ಗೆಯೇ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟಿಪ್ಪರ್ ಹರಿದು ಕರ್ತವ್ಯನಿರತರಾಗಿದ್ದ ಮಹಿಳಾ ಪೌರಕಾರ್ಮಿಕರೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ನಗರದ ಖಾನಾಪುರ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಅವಕ್ಕಾ ಕೋಲಕಾರ (50) ಮೃತಪಟ್ಟ ದುರ್ದೈವಿ.ಎಂದಿನಂತೆ ಇಂದು ಮುಂಜಾನೆ ನಗರದ ಕಸ ಕ್ಲೀನ್ ಮಾಡಲು ಬಂದಿದ್ದ ಕಾರ್ಮಿಕ ಮಹಿಳೆ. ಆದರೆ ವಿಧಿಯಾಟವೇ ಬೇರೆ ಆಗಿತ್ತು. ವೇಗವಾಗಿ ಬಂದ ಟಿಪ್ಪರ್ ಲಾರಿ ಮೃತ ಮಹಿಳೆಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದು ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಪೌರಕಾರ್ಮಿಕ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭೀಕರ ಘಟನೆ ನಡೆದ ಬೆನ್ನಲ್ಲೇ ಚಾಲಕ ಟಿಪ್ಪರ್ ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಉಪಮೇಯರ್ ವಾಣಿ ಜೋಶಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಟಿಪ್ಪರ್ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇತರೆ ಸುದ್ದಿಗಳು