ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು
ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 7 ತಿಂಗಳ ಮಗು ಹಾಗೂ ವೃದ್ಧ ದಂಪತಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಮರಾಜನಗರದ ದೊಡ್ಡಮೂಡಹಳ್ಳಿ ಕ್ರಾಸ್ ಬಳಿ ಹಾಗೂ ಚಿಕ್ಕಬಳ್ಳಾಪುರದ ಸಾದಲಿ ಕ್ರಾಸ್ ಬಳಿ ಅಪಘಾತಗಳು ಸಂಭವಿಸಿವೆ.ಚಾಮರಾಜನಗರ (Chamarajanagar) ಮತ್ತು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಗಳಲ್ಲಿ ಗುರುವಾರ ಎರಡು ಭೀಕರ ರಸ್ತೆ ಅಪಘಾತಗಳು ಸಂಭವಿಸಿದ್ದು, 7 ತಿಂಗಳ ಹಸುಗೂಸು ಹಾಗೂ ವೃದ್ಧ ದಂಪತಿ ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ವೇಗದ ಚಾಲನೆ ಮತ್ತು ಚಾಲಕನ ನಿಯಂತ್ರಣ ತಪ್ಪಿದ ಕಾರಣದಿಂದಾಗಿ ಈ ಎರಡೂ ದುರಂತಗಳು ಸಂಭವಿಸಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅಪಘಾತದ ತೀವ್ರತೆಗೆ ವಾಹನಗಳು ಸಂಪೂರ್ಣ ಜಖಂಗೊಂಡಿವೆ.ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ದೊಡ್ಡಮೂಡಹಳ್ಳಿ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ನಡೆದಿದೆ. ವೇಗವಾಗಿ ಬಂದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಪ್ರಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ಕಾರಿನಲ್ಲಿದ್ದ ಮುಬಾರಕ್ (70) ಹಾಗೂ ಕೇವಲ 7 ತಿಂಗಳ ಹಸುಗೂಸು ಸ್ಥಳದಲ್ಲೇ ಕೊನೆಯುಸಿರೆಳೆದಿವೆ. ಇನ್ನುಳಿದಂತೆ ಮಕ್ಕಳು ಸೇರಿದಂತೆ ಕಾರಿನಲ್ಲಿದ್ದ ಐವರಿಗೆ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಾಮರಾಜನಗರದ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಚಾಮರಾಜನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.