ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...
ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ತೈಲ ಬೆಲೆ ಏರಿಕೆ ಶಾಕ್ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತ ನಾಲ್ಕನೇ ಬಾರಿಗೆ ಹೆಚ್ಚಳ ಕಂಡಿದ್ದು, ಕಳೆದ 13 ದಿನಗಳಲ್ಲಿ ಇದು ನಾಲ್ಕನೇ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 2.61 ರೂ. ಏರಿಕೆಯಾಗಿದ್ದರೆ, ಡೀಸೆಲ್ ದರ 2.71 ರೂ. ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯ ನಂತರ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 110.93 ರೂ. ಗೆ ತಲುಪಿದೆ. ಭಾನುವಾರಕ್ಕೆ (ಮೇ 24) ಹೋಲಿಸಿದರೆ ಡೀಸೆಲ್ ದರ 95.99 ರೂ. ನಿಂದ 98.54 ರೂ. ಗೆ ಏರಿದೆ. ದೆಹಲಿಯಲ್ಲಿ ಈಗಾಗಲೇ ಪೆಟ್ರೋಲ್ ದರ 100 ರೂ. ಗಡಿದಾಟಿದೆ. ಒಂದು ದಿನ ಬಿಟ್ಟು ಒಂದು ದಿನದಂತೆ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿರುವುದು ವಾಹನ ಸವಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಕೆಲವರು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಈ ರೀತಿ ಮುಂದುವರಿದರೆ ಜೀವನ ನಡೆಸುವುದು ಕಷ್ಟ ಎಂದು ತಮ್ಮ ಸಂಕಷ್ಟವನ್ನು ವ್ಯಕ್ತಪಡಿಸಿದ್ದಾರೆ. ಈ ನಿರಂತರ ಬೆಲೆ ಏರಿಕೆಯಿಂದ ದಿನನಿತ್ಯದ ಬಳಕೆ ವಸ್ತುಗಳ ಮೇಲೆ ಸಹ ಪರಿಣಾಮ ಬೀರುವ ಆತಂಕವಿದೆ.