ಬಿಡದಿ ಟೌನ್ ಶಿಪ್ ಸಭೆಯಲ್ಲಿ ಡಿಕೆಶಿಗೆ ಸೈಟ್ ಮನವಿ ಇಟ್ಟ ರೈತರು...!
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಡದಿ ಪ್ರದೇಶದ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯೋಜನೆ ಕುರಿತು ರೈತರೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯ ನಂತರ ಅವರು ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಯೋಜನೆಯ ಬಗ್ಗೆ ವಿವರವಾಗಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಮಾಗಡಿ ಬಾಲಕೃಷ್ಣ, ನರೇಂದ್ರ ಸ್ವಾಮಿ ಮತ್ತು ಡಿಸಿಎಂ ಕಚೇರಿಯ ಕಾರ್ಯದರ್ಶಿ ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು. ಟೌನ್‌ಶಿಪ್ ಯೋಜನೆ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಇಂದು ಬೆಳಿಗ್ಗೆ ರೈತರೊಂದಿಗೆ ನಡೆದ ಸಭೆಯಲ್ಲಿ ಹೆಚ್ಚಿನ ರೈತರು ಯೋಜನೆಗೆ ಸಹಮತ ಸೂಚಿಸಿರುವುದಾಗಿ ತಿಳಿಸಿದರು. ಅವರ ಹೇಳಿಕೆಯ ಪ್ರಕಾರ, ಸುಮಾರು 80% ರೈತರು ಸರ್ಕಾರ ಘೋಷಿಸಿರುವ ಪರಿಹಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಟೌನ್‌ಶಿಪ್ ಯೋಜನೆ ಬಗ್ಗೆ ಸರ್ಕಾರ ಪ್ರಕಟಿಸಿರುವ ಪರಿಹಾರ ಕ್ರಮಗಳು ಮತ್ತು ಭೂಮಿ ಸ್ವಾಧೀನ ಪ್ರಕ್ರಿಯೆ ಕುರಿತು ರೈತರಿಗೆ ವಿವರ ನೀಡಲಾಗಿದ್ದು, ಅವರು ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ. ನಂತರ ರೈತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ನೋಟಿಫಿಕೇಶನ್‌ಗಳನ್ನು ಹಂತ ಹಂತವಾಗಿ ಹೊರಡಿಸುವುದಾಗಿ ಭರವಸೆ ನೀಡಿದರು.