ಮಳೆಗಾಲ ಎದುರಿಸಲು ನಗರಸಭೆ ಸಿದ್ದತೆ : ಪೌರಾಯುಕ್ತ ಮಹಾಂತೇಶ್ ಹಂಗರಗಿ
ಉಡುಪಿ : ಪ್ರಸ್ತುತ ಉಡುಪಿ ನಗರಕ್ಕೆ ವಾರಾಹಿ ಕಾಲುವೆಯಿಂದ ನೀರು ಪೂರೈಕೆಯಾಗುತ್ತಿರುವುದರಿಂದ ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಸದ್ಯ ಕಾಲುವೆಯಿಂದ ಜೂ.30ರವರೆಗೆ ಮಾತ್ರ ನೀರು ತೆಗೆಯಲು ಅನುಮತಿ ಇದ್ದು, ಅದನ್ನು ಮತ್ತೆ ಎರಡು ಮೂರು ತಿಂಗಳ ಕಾಲ ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಹೇಳಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ಸಂಘದ ‘ಸನ್ಮತಿ’ ಪತ್ರಿಕೆಯ ಏಪ್ರಿಲ್ ತಿಂಗಳ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು. ಕಳೆದ ವರ್ಷ ಕೇವಲ ಸ್ವರ್ಣ ನದಿಯನ್ನು ಅವಲಂಬಿಸಿಕೊಂಡಿರುವುದ ರಿಂದ ನೀರಿನ ಸಮಸ್ಯೆ ಉಂಟಾಗಿತ್ತು. ಆದರೆ ಈ ಬಾರಿ ಜನವರಿಯಿಂದ ವಾರಾಹಿ ಕಾಲುವೆಯಿಂದ ನಗರಕ್ಕೆ ನೀರು ಪೂರೈಸುತ್ತಿದ್ದೇವೆ. ಕಾಲುವೆಯ ನೀರನ್ನು ಹಾಲಾಡಿ ವಾಟರ್ ಟ್ರೀಟ್ಮೆಂಟ್ ಪ್ಲಾಂಟ್ಗೆ ತರಿಸಿ, ಅಲ್ಲಿಂದ ಮಣಿಪಾಲಕ್ಕೆ ಪಂಪ್ ಮಾಡಲಾಗುತ್ತಿದೆ. ಇಲ್ಲಿಂದ ಇಡೀ ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದೇವೆ. ಕಾಲುವೆಯಿಂದ ಜೂ.30ರವರೆಗೂ ನೀರು ತೆಗೆಯಲು ಅನುಮತಿ ದೊರೆತಿರುವುದರಿಂದ ಅಲ್ಲಿಯವರೆಗೆ ನಗರಕ್ಕೆ ನೀರಿನ ಸಮಸ್ಯೆ ಆಗುವುದಿಲ್ಲ ಎಂದರು. ಜೂ.30ರಿಂದ ಸ್ವರ್ಣ ನದಿಯಿಂದ ನೀರನ್ನು ಪಂಪ್ ಮಾಡಿ ನಗರಕ್ಕೆ ಪೂರೈಕೆ ಮಾಡಲಾಗುತ್ತದೆ. ಸದ್ಯ ಬಜೆ ಡ್ಯಾಂನಲ್ಲಿ 2.4ಮೀಟರ್ ನೀರಿನ ಸಂಗ್ರಹ ಇದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಜೆಯಲ್ಲಿ ಒಳ ಹರಿವು ಆರಂಭವಾಗಿದೆ. ಆದುದರಿಂದ ಸ್ವರ್ಣನದಿಯಲ್ಲಿ ನೀರಿನ ಸಮಸ್ಯೆ ಇಲ್ಲ. ಆದುದರಿಂದ ನಗರಸಭೆಯಿಂದ ಈ ವರ್ಷ ಯಾವುದೇ ರೇಷನಿಂಗ್ ಪದ್ಧತಿ ಮಾಡುವುದಿಲ್ಲ ಎಂದು ಅವರು ತಿಳಿಸಿದರು. ವಾರಾಹಿ ಕಾಲುವೆಯಿಂದ ಪಂಪ್ ಮಾಡುವ 45 ಎಂಎಲ್ಡಿ ನೀರಿನಲ್ಲಿ 10 ಎಂಎಲ್ಡಿ ನೀರನ್ನು ಹಾಲಾಡಿಯಿಂದ ಮಣಿಪಾಲದವರೆಗಿನ ಮಾರ್ಗದಲ್ಲಿನ ಎಲ್ಲ ಗ್ರಾಪಂಗಳಿಗೂ ಪೂರೈಕೆ ಮಾಡಲಾಗುತ್ತಿದೆ. ಉಳಿದ 35ಎಂಎಲ್ಡಿ ನೀರನ್ನು ನಗರಕ್ಕೆ ನೀಡಲಾಗುತ್ತಿದೆ. ಬಜೆ ಮತ್ತು ವಾರಾಹಿ ಕಾಲುವೆಯಿಂದ ನಾವು ಒಟ್ಟು 53ಗ್ರಾಮಗಳಿಗೆ ನೀರು ಒದಗಿಸುತ್ತಿದ್ದೇವೆ. ಹಾಗಾಗಿ ಈ ಬೇಸಿಗೆಯಲ್ಲಿ ಈ ಎಲ್ಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ ಎಂದು ಅವರು ಹೇಳಿದರು. ನಗರಸಭೆಯಿಂದ ಮಳೆಗಾಲಕ್ಕೆ ಮುಜ್ರಾಗ್ರತಾ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ತೋಡು ಹಾಗೂ ಚರಂಡಿಗಳಲ್ಲಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲು ಹೆಚ್ಚುವರಿಯಾಗಿ 40 ಕಾರ್ಮಿಕರನ್ನು ನಿಯೋಜಿಸಲಾಗಿದೆ. ಮಳೆಗಾಲದಲ್ಲಿ ಸೊಳ್ಳೆಗಳಿಂದ ರೋಗ ಬಾರದಂತೆ ತಡೆಯಲು ರಾಸಾಯನಿಕ ಸಿಂಪಡನೆ ಹಾಗೂ ಫಾಗಿಂಗ್ ಯಂತ್ರಗಳನ್ನು ಸಿದ್ಧಪಡಿಸಿಕೊಂಡು ಇರಿಸಲಾಗಿದೆ ಎಂದು ಪೌರಾಯುಕ್ತ ತಿಳಿಸಿದರು.