ಹಂದೂರು-ಹೊನ್ನೆಕೂಡಿಗೆ ಪ್ರದೇಶದಲ್ಲಿ ಹೊಸ ಸೇತುವೆ ಉದ್ಘಾಟಿಸಿದ ಸಿದ್ದರಾಮಯ್ಯ ...
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಹಂದೂರು-ಹೊನ್ನೆಕೂಡಿಗೆ ಪ್ರದೇಶದಲ್ಲಿ ಹೊಸ ಸೇತುವೆಯನ್ನು ನಿನ್ನೆ ಸೋಮವಾರ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ಸೇತವೆಗೆ ಸಿದ್ದರಾಮಯ್ಯ ಸೇತುವೆ ಎಂದು ನಾಮಕರಣ ಮಾಡಲಾಗಿದೆ. ಭದ್ರಾ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಈ ಸೇತುವೆಯು ಹಂದೂರು ಮತ್ತು ಎನ್ ಆರ್ ಪುರವನ್ನು ನೇರವಾಗಿ ಸಂಪರ್ಕಿಸುತ್ತದೆ. ಭದ್ರಾ ಹಿನ್ನೀರಿನ ಹಂದೂರು ಬಳಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 58 ಮೀಟರ್ ಉದ್ದದ ಸೇತುವೆ ಇದಾಗಿದೆ. ಹತ್ತಾರು ಹಳ್ಳಿ ಗ್ರಾಮಸ್ಥರು 6 ದಶಕಗಳಿಂದ ಸೇತುವೆಗೆ ಬೇಡಿಕೆ ಇಟ್ಟಿದ್ದರು. ಸೇತುವೆ ನಿರ್ಮಾಣದಿಂದ 10ಕ್ಕೂ ಹೆಚ್ಚು ಹಳ್ಳಿಗಳಿಗೆ ವರದಾನವಾಗಿದೆ. ಗ್ರಾಮಸ್ಥರು ಪಟ್ಟಣಕ್ಕೆ ಬರಲು ಮೊದಲು 30 ಕಿಮೀ ಸುತ್ತಿ ಬರಬೇಕಿತ್ತು. ಈ ದೂರವನ್ನು ಸೇತುವೆ ಕೇವಲ 3 ಕಿಮೀಗೆ ಇಳಿಸಿದೆ.ಎನ್ ಆರ್ ಪುರ ತಾಲೂಕಿನಲ್ಲಿ ನಿರ್ಮಾಣವಾಗಿರುವ ಜಿಲ್ಲೆಯ ಅತ್ಯಂತ ಉದ್ದವಾದ ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಸೇತುವೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ಮಹಿಳೆಯರು ಪೂರ್ಣ ಕುಂಭ ಸ್ವಾಗತ ಕೋರಿದರು. ಬಳಿಕ ದೇವರಿಗೆ ಪೂಜೆ ಸಲ್ಲಿಸಿ ಟೇಪ್ ಕತ್ತರಿಸುವ ಮೂಲಕ ಸೇತುವೆಯನ್ನು ಸಿಎಂ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನರಸಿಂಹರಾಜಪುರದಲ್ಲಿ ಸೇತುವೆ ನಿರ್ಮಾಣ ಬಹುದಿನದ ಬೇಡಿಕೆಯಾಗಿತ್ತು. ಈಗ ನನ್ನ ಅಧಿಕಾರಾವಧಿಯಲ್ಲಿಯೇ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ಬಿಜೆಪಿಯವರ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಯಾವುದೇ ಕ್ರಮವಾಗಿರಲಿಲ್ಲ ಎಂದಿದ್ದಾರೆ.