ರಾಜ್ಯಾದ್ಯಂತ ಬಿಸಿಲ ತಾಪ ಹೆಚ್ಚಳ ! ಕಲ್ಬುರ್ಗಿಯಲ್ಲಿ 42 ಡಿಗ್ರಿ ತಾಪಮಾನ ದಾಖಲು
ರಾಜ್ಯಾದ್ಯಂತ ಉರಿಯುತ್ತಿರುವ ಬಿಸಿಲು ಜನಜೀವನವನ್ನು ಕಂಗೆಡಿಸಿದ್ದು ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಕಲಬುರಗಿಯಲ್ಲಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲೂ ದಾಖಲೆ ಬಿಸಿಲು ಕಂಡುಬಂದಿದ್ದು, ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ಉಷ್ಣ ಅಲೆಯ ಎಚ್ಚರಿಕೆ ನೀಡಿದೆ. ಸಾರ್ವಜನಿಕರು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ತಾಪಮಾನ ಭಾರೀ ಏರಿಕೆಯಾಗುತ್ತಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಉಷ್ಣತೆಯ ತೀವ್ರತೆ ಹೆಚ್ಚಾಗಿ ಕಂಡುಬರುತ್ತಿದ್ದು, ಜನರು ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ.ರಾಜ್ಯದ 5ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕಲಬುರಗಿ ಜಿಲ್ಲೆಯಲ್ಲಿ ಅತ್ಯಧಿಕವಾಗಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ಹಂಗಾಮಿನ ಗರಿಷ್ಠ ಮಟ್ಟಗಳಲ್ಲಿ ಒಂದಾಗಿದೆ. ಗದಗ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಲ್ಲದೆ, ಬೀದರ್, ಬಳ್ಳಾರಿ, ವಿಜಯನಗರ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಉಷ್ಣ ಅಲೆ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯಕ್ಕೆ ಭಾರೀ ಮಳೆಯ ಲಕ್ಷಣಗಳು ಕಾಣಿಸದಿದ್ದರೂ, ಏಪ್ರಿಲ್ 17ರ ನಂತರ ರಾಜ್ಯದ ಕೆಲ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.