2026 - 27 ನೇ ಸಾಲಿನ ರಾಜ್ಯ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ...
2026 - 27 ನೇ ಸಾಲಿನ ರಾಜ್ಯ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ದಸರಾ ರಜೆಯು 19 ದಿನಗಳು ಇರಲಿವೆ. ಇನ್ನೂ ಈ ಬಾರಿ ಮೇ 29 ರಿಂದ ಶಾಲೆಗಳು ಪ್ರಾರಂಭವಾಗಲಿದ್ದು, 245 ಶಾಲಾ ಕೆಲಸದ ದಿನ ನಿಗದಿ ಮಾಡಲಾಗಿದೆ. 119 ರಜೆಗಳು ಸಿಗಲಿವೆ. ಪ್ರಮುಖ ದಿನಾಂಕಗಳು, ರಜೆ ವಿವರಗಳು ಇಲ್ಲಿವೆ.ಬೆಂಗಳೂರು: 2026 - 27ನೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದ್ದು, ಮೇ 29 ರಿಂದ ಕರ್ನಾಟಕ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತರಗತಿಗಳು ಆರಂಭಗೊಳ್ಳಲಿವೆ.ಈ ಬಾರಿ ಒಟ್ಟು 245 ಶಾಲಾ ಕೆಲಸದ ದಿನಗಳನ್ನು ನಿಗದಿಪಡಿಸಲಾಗಿದ್ದು, ಅ.3 ರಿಂದ 21 ರವರೆಗೆ ದಸರಾ ರಜೆ ಹಾಗೂ 2027ರ ಏ. 11 ರಿಂದ ಬೇಸಿಗೆ ರಜೆ ಘೋಷಿಸಲಾಗಿದೆ.ಶಾಲೆಗಳ ಮೊದಲ ಅವಧಿ ಮೇ 29 ರಿಂದ ಅ.2 ರವರೆಗೆ ಮತ್ತು ಎರಡನೇ ಅವಧಿ ಅಕ್ಟೋಬರ್ 22 ರಿಂದ 2027ರ ಏಪ್ರಿಲ್ 10 ರವರೆಗೆ ನಡೆಯಲಿದೆ. ಹೀಗಾಗಿ, ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಜೂ. 30ರ ಒಳಗೆ ಪೂರ್ಣಗೊಳಿಸಬೇಕು. ಶಾಲೆ ಬಿಟ್ಟಿರುವ 6 ವರ್ಷದಿಂದ 18 ವರ್ಷದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ದಾಖಲಾತಿ ಜಾಗೃತಿ ಅಭಿಯಾನ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.2026ರ ಜೂನ್ ಮೊದಲ ವಾರದಲ್ಲೇ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆಗೆ ಆದೇಶಿಸಿರುವ ಇಲಾಖೆಯು, ದಾಖಲಾತಿ ಅಭಿಯಾನದ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರಲು ವಿಶೇಷ ಒತ್ತು ನೀಡಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2026 - 27ನೇ ಶೈಕ್ಷಣಿಕ ಸಾಲಿನಲ್ಲಿ ಏಕ ರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ಶಿಕ್ಷಣ ಇಲಾಖೆ ನಿಗದಿಪಡಿಸಿದೆ.